ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ | Karnataka State Police Recruitment 2022 Apply Online For Police Constable Posts

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಇರುವ 3,484 ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ (DAR) ಹಾಗೂ ನಗರ ಸಶಸ್ತ್ರ ಮೀಸಲು ಪೊಲೀಸ್ (CAR) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಪೊಲೀಸ್ ಇಲಾಖೆ (Karnataka State Police Recruitment 2022 For Police Constable) ಯ ಉದ್ಯೋಗವಕಾಶಕ್ಕಾಗಿ ಕನಸು ಕಂಡಿರುವ ಯುವ ಜನರಿಗೆ ಇದೊಂದು ಸುವರ್ಣವಕಾಶ.

Karnataka State Police Recruitment 2022 Notification

ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿ ಕುರಿತು ರಾಜ್ಯ ಸರ್ಕಾರ ಸೆ.12 ರಂದು ಅಧಿಸೂಚನೆ ಪ್ರಕಟಿಸಿದೆ. ಕಲ್ಯಾಣ ಕರ್ನಾಟಕ (ಹೈ–ಕ) ವೃಂದದ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕವಾಗಿ ನೋಟಿಫಿಕೇಶನ್ ಪ್ರಕಟಿಸಲಾಗಿದೆ.

ಹುದ್ದೆಗಳ ವಿವರ

ರಾಜ್ಯದ ಎಲ್ಲ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ 2,996 ಡಿಎಆರ್ ಹಾಗೂ ಸಿಎಆರ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 68 ಹುದ್ದೆಗಳನ್ನು ತೃತೀಯ ಲಿಂಗಿಗಳಿಗೆ (ಪುರುಷ) ಮೀಸಲು ನೀಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗದಲ್ಲಿ 420 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

ಆನ್‌ಲೈನ್‌ ಮೂಲಕ ಸೆ.19 ರಿಂದ ಅಕ್ಟೋಬರ್ 31 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಇಲಾಖೆಯ ಅಧಿಕೃತ ವೆಬ್‌ ಸೈಟ್‌ ಮೂಲಕ ಆನ್‌ಲೈನ್‌ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಶುಲ್ಕ ಪಾವತಿಸಲು ನವೆಂಬರ್ 3 ರವರೆಗೆ ಅವಕಾಶ ಕೊಡಲಾಗಿದೆ.

ಅರ್ಜಿ ಶುಲ್ಕ ಮಾಹಿತಿ

ಸಾಮಾನ್ಯ, 2ಎ, 2ಬಿ, 3ಬಿ, 3ಎ ಅಭ್ಯರ್ಥಿಗಳು ₹400 , ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ 1 ಅಭ್ಯರ್ಥಿ ಗಳು ₹200 ಶುಲ್ಕ ನಿಗದಿ ಪಡಿಸಲಾಗಿದೆ. ಅರ್ಜಿ ಶುಲ್ಕ ಆನ್ ಲೈನ್‌ನಲ್ಲಿ, ಅಧಿಕೃತ ಬ್ಯಾಂಕ್ ಶಾಖೆಗಳ, ಸ್ಥಳೀಯ ಅಂಚೆ ಕಚೇರಿಗಳಲ್ಲಿ ಕಚೇರಿ ವೇಳೆಯಲ್ಲಿ ಶುಲ್ಕವನ್ನು ಪಾವತಿಸಬಹುದು. ಶುಲ್ಕ ಪಾವತಿಸುವ ಸಮಯದಲ್ಲಿ ತೊಂದರೆಯಾದಲ್ಲಿ ಸಹಾಯವಾಣಿ 080-22943346 ಸಂಪರ್ಕಿಸಬಹುದು.

ವಿದ್ಯಾರ್ಹತೆ, ವಯೋಮಿತಿ ಮಾಹಿತಿ

10 ನೇ ತರಗತಿ/ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆ ಉತ್ತೀರ್ಣರಾಗಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಯ ಕನಿಷ್ಠ ವಯೋಮಿತಿ 18 ವರ್ಷ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷಗಳು. ಎಸ್‌.ಸಿ, ಎಸ್‌.ಟಿ, ಒಬಿಸಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 27 ವರ್ಷನಿಗದಿ ಮಾಡಲಾಗಿದೆ.

ಪೊಲೀಸ್ ಕಾನ್‌ಸ್ಟೆಬಲ್‌ ಆಯ್ಕೆ ವಿಧಾನ ಹೇಗೆ?

ಲಿಖಿತ ಪರೀಕ್ಷೆ, ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣವಾದ ನಂತರ ಲಿಖಿತ ಪರೀಕ್ಷೆಯ ದಿನಾಂಕವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಪ್ರವೇಶ ಪತ್ರವನ್ನು (Call Letter) ಡೌನ್‌ಲೋಡ್‌ ಮಾಡಿಕೊಂಡು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಇದೇ ವರ್ಷದ ನವೆಂಬರ್/ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆಯನ್ನು ನಡೆಯುವ ಸಾಧ್ಯತೆ ಇದೆ. 

ಪೊಲೀಸ್ ಕಾನ್‌ಸ್ಟೆಬಲ್‌ ಪಠ್ಯಕ್ರಮ

ಸಶಸ್ತ್ರ ಮೀಸಲು ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳಿಗೆ ಸಂಬಂಧಿಸಿದಂತೆ 100 ಅಂಕಗಳಿಗೆ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬಹು ಆಯ್ಕೆ ಮಾದರಿಯ (ಆಬ್ಜೆಕ್ಟಿವ್) ಪ್ರಶ್ನೆ ಪತ್ರಿಕೆ ಇರುತ್ತದೆ. ಒಂದೂವರೆ ಗಂಟೆ ಅವಧಿಯ ಪರೀಕ್ಷೆ ನಡೆಸಲಾಗುತ್ತದೆ.

ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ, ವಿಜ್ಞಾನ, ಭೂಗೋಳ, ಇತಿಹಾಸ, ಭಾರತದ ಸಂವಿಧಾನ, ಭಾರತದ ಸ್ವಾತಂತ್ರ್ಯ ಸಂಗ್ರಾಮ, ಸಾಮಾನ್ಯ ಮಾನಸಿಕ ಸಾಮರ್ಥ್ಯ ಹಾಗೂ ನೀತಿ ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನೆಗೆಟಿವ್‌ ಅಂಕ ಇರುತ್ತೆ ಎಚ್ಚರ..!

ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ಹಾಜರಾಗುವ ಅಭ್ಯರ್ಥಿಗಳು ಗಮನದಲ್ಲಿರಲಿ, ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. 4 ತಪ್ಪು ಉತ್ತರಗಳಿಗೆ 1 ಅಂಕ ಕಳೆಯಲಾಗುತ್ತದೆ (1ಕ್ಕೆ 0.25 ಅಂಕ). ಆದ್ದರಿಂದ ಅಭ್ಯರ್ಥಿಗಳು ಸರಿಯಾದ ಉತ್ತರವನ್ನೇ ಗುರುತಿಸಲು ಪ್ರಯತ್ನಿಸಬೇಕು. ಆದಷ್ಟು ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿ.

ನಂತರ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ದೇಹದಾರ್ಢ್ಯ ಮತ್ತು ಸಹಿಷ್ಣುತೆ ಪರೀಕ್ಷೆಗೆ ಕರೆಯಲಾಗುತ್ತದೆ. ಅದರಲ್ಲಿ ಉತ್ತೀರ್ಣಗೊಂಡವರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ. ತದನಂತರ ಮೆರಿಟ್ ಆಧಾರ ಹಾಗೂ ವಿವಿಧ ರೀತಿಯ ಮೀಸಲಾತಿಗೆ ಅನುಗುಣವಾಗಿ ಆಯ್ಕೆ ಪಟ್ಟಿ ‍ಪ್ರಕಟಿಸುತ್ತಾರೆ.

ಪೊಲೀಸ್ ಕಾನ್‌ಸ್ಟೆಬಲ್‌ ವೇತನ ಶ್ರೇಣಿ

ಅಧಿಸೂಚನೆಯಲ್ಲಿರುವಂತೆ ವೇತನ ಶ್ರೇಣಿಯು ₹23,500 ರಿಂದ ₹47,650 ವರೆಗಿರುತ್ತದೆ. ನೇರ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳು ಎರಡೂವರೆ ವರ್ಷ ಕಾಯಂ ಪೂರ್ವ ತರಬೇತಿ ಅವಧಿಯಲ್ಲಿರುತ್ತಾರೆ.

ಪ್ರಮಾಣ ಪತ್ರ ಸಲ್ಲಿಕೆ

ಮೀಸಲಾತಿಯನ್ನು ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ವರ್ಗದ ನಮೂನೆಯಲ್ಲೇ ಮೀಸಲಾತಿ ಪ್ರಮಾಣ ಪತ್ರಗಳನ್ನು ಪಡೆಯಬೇಕು. ನೇಮಕಾತಿ ಹಂತದಲ್ಲಿ ಸಕ್ಷಮ ಪ್ರಾಧಿಕಾರ ಕೇಳಿದರೆ ಕೊಡಬೇಕು. ತಪ್ಪು ಮಾಹಿತಿ ನೀಡಿದ್ದಲ್ಲಿ ಕಾನೂನು ಕ್ರಮವಿರುತ್ತದೆ ಹಾಗಾಗಿ ಅಭ್ಯರ್ಥಿಗಳು ತುಂಬ ಎಚ್ಚರಿಕೆಯಿಂದ ಅರ್ಜಿ ಸಲ್ಲಿಸಬೇಕು.

ದೇಹದಾರ್ಢ್ಯತೆ ಪರೀಕ್ಷೆ ಮಾಹಿತಿ

ಎತ್ತರ 168 ಸೆಂ.ಮೀ, ಎದೆಯ ಸುತ್ತಳತೆ 86 ಸೆಂ.ಮೀ (ಬುಡಕಟ್ಟು ಅಭ್ಯರ್ಥಿಗಳಿಗೆ ಎತ್ತರದಲ್ಲಿ ಹಾಗೂ ಎದೆಯ ಸುತ್ತಳತೆಯಲ್ಲಿ ರಿಯಾಯಿತಿ ಇರುತ್ತದೆ).

ಸಹಿಷ್ಣುತೆ ಪರೀಕ್ಷೆ

  • ಓಟ 1600 ಮೀಟರ್ (ಆರೂವರೆ ನಿಮಿಷದಲ್ಲಿ).
  • ಎತ್ತರ ಜಿಗಿತ 1.20 ಮೀಟರ್‌ಗೆ ಕಡಿಮೆ ಇರದಂತೆ,
  • ಉದ್ದ ಜಿಗಿತ 3.20 ಮೀಟರ್‌ಗೆ ಕಡಿಮೆ ಇಲ್ಲದಂತೆ (ಎರಡರಲ್ಲಿ ಒಂದು).
  • ಗುಂಡು ಎಸೆತ 5.26 ಕೆ.ಜಿ.

Karnataka State Police Recruitment 2022: ಆಸಕ್ತ ಅಭ್ಯರ್ಥಿಗಳು ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ksp-recruitment.in ಅರ್ಜಿ ಸಲ್ಲಿಸಬಹುದು.

Karnataka State Police Recruitment 2022 Apply Online For Police Constable Posts

Leave a Comment