ಬೆಂಗಳೂರು, ಸೆಪ್ಟೆಂಬರ್ 26: ರಾಜ್ಯದ ಸಾವಿರಾರು ಉದ್ಯೋಗಾಕಾಂಕ್ಷಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಮತ್ತು ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಗರಿಷ್ಠ ವಯೋಮಿತಿಯಲ್ಲಿ 2 ವರ್ಷಗಳ ಸಡಿಲಿಕೆ (PSI PC Age Relaxation) ನೀಡಲು ತೀರ್ಮಾನಿಸಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶುಕ್ರವಾರ ಈ ಸಂಬಂಧ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ.
ಪ್ರತಿಭಟನೆಗಳ ಬೆನ್ನಲ್ಲೇ ನಿರ್ಧಾರ?
ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಬೃಹತ್ ಪ್ರತಿಭಟನೆ ನಡೆಸಿ, ಹಲವು ವರ್ಷಗಳಿಂದ ನೇಮಕಾತಿ ನಡೆಯದ ಹಿನ್ನೆಲೆ ವಯೋಮಿತಿ ಸಡಿಲಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಚರ್ಚೆ ನಡೆಸಿ ಸಡಿಲಿಕೆ ನೀಡಲು ಮುಂದಾಗಿದೆ.
PSI PC Age Relaxation-ಒಂದು ಬಾರಿಯ ಕ್ರಮ:
ಗೃಹ ಸಚಿವ ಪರಮೇಶ್ವರ್ ಈ ನಿರ್ಧಾರವನ್ನು ಒಂದು ಬಾರಿಯ ಕ್ರಮವೆಂದು ಸ್ಪಷ್ಟಪಡಿಸಿದ್ದಾರೆ. ಅಂದರೆ, ಮುಂದಿನ ನೇಮಕಾತಿ ಅಧಿಸೂಚನೆಗೆ ಮಾತ್ರ ಈ ಸಡಿಲಿಕೆ ಅನ್ವಯವಾಗಲಿದೆ. ಬಳಿಕ ವಯೋಮಿತಿ ಮರು ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳಿಂದ ತಿಳಿದುಬಂದಿದೆ.
PSI Age Relaxation:
- ಸಾಮಾನ್ಯ ಅಭ್ಯರ್ಥಿಗಳಿಗೆ: 28ರಿಂದ 30 ವರ್ಷ
- ಪರಿಶಿಷ್ಟ ಜಾತಿ/ಪಂಗಡ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 30 ರಿಂದ 32 ವರ್ಷ
PC Age Relaxation:
- ಸಾಮಾನ್ಯ ಅಭ್ಯರ್ಥಿಗಳಿಗೆ: 25 ರಿಂದ 27 ವರ್ಷ
- ಪರಿಶಿಷ್ಟ ಜಾತಿ/ಪಂಗಡ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 27 ರಿಂದ 30 ವರ್ಷ
ಇದರಿಂದ ಸಾವಿರಾರು ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗೆ ಹಾಜರಾಗುವ ಅವಕಾಶ ಪಡೆಯಲಿದ್ದಾರೆ.
ಮುಂದಿನ ಹಂತ: ಈ ಸಡಿಲಿಕೆಯನ್ನು ಜಾರಿಗೊಳಿಸಲು ಪೊಲೀಸ್ ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಅಗತ್ಯವಿದೆ. ಅದಕ್ಕಾಗಿ ಗೃಹ ಸಚಿವರು ಅಧಿಕಾರಿಗಳಿಗೆ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ. ಅಧಿಕೃತ ಅಧಿಸೂಚನೆ ಹೊರಬಿದ್ದ ಕೂಡಲೇ PSI ಮತ್ತು ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ.
ಹಿನ್ನೆಲೆ: ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಪೊಲೀಸ್ ಹುದ್ದೆಗಳ ನೇಮಕಾತಿ ನಡೆದಿರಲಿಲ್ಲ, ಇದರಿಂದಾಗಿ ವಯೋಮಿತಿ ದಾಟಿದ ಹಲವಾರು ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಸ್ಥಿತಿ ಎದುರಿಸಿದ್ದರು. ಈಗ ಸರ್ಕಾರದ ಸಡಿಲಿಕೆ ನಿರ್ಧಾರದಿಂದ ಅವರಿಗೂ ಅವಕಾಶ ಲಭ್ಯವಾಗಿದೆ.

